ಯಂಗ್ ಶಾವೋ -
ಚೀನದ ನೂತನ ಶಿಲಾಯುಗ ಸಂಸ್ಕøತಿಗೆ ಸಂಬಂಧಿಸಿದ ಒಂದು ಪ್ರಧಾನ ಸ್ಥಳ. ವಾಯುವ್ಯ ಚೀನದ ಹೊನಾನ್ ಪ್ರಾಮತ್ಯದ ಬೆಟ್ಟಪ್ರದೇಶಕ್ಕೆ ಸೀಮಿತವಾದ ನೂತನ ಶಿಲಾಯುಗ ಸಂಸ್ಕøತಿಯನ್ನೇ ಯಂಗ್ ಶಾವೋ ಸಂಸ್ಕøತಿ ಎಂದು ಗುರುತಿಸಲಾಗಿದೆ. ಇದು ಆಗ್ನೇಯ ಏಷ್ಯ ಹಾಗೂ ಫಿಲಿಫೈನ್ಸ್‍ಗಳಿಗೆ ಹರಡಿರಬಹುದಾದರೂ ಮೂಲತಃ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಟರ್ಕಿಕ್ ಮತ್ತು ಟಿಬೇಟಿಯನ್ ಬುಡಕಟ್ಟು ಜನಾಂಗದವರಿಂದ ಉಂಟಾದ ಸಂಸ್ಕøತಿ, ಆಂಡರ್ಸನ್ ಈ ಸಂಸ್ಕøತಿಯ ಅನ್ವೇಷಕ.
	
ಇಲ್ಲಿ ಇಟ್ಟಿಗೆ ಮತ್ತು ಬಿಳಿ, ಕೆಂಪು ಹಾಗೂ ಕಪ್ಪುಬಣ್ಣದ ವಿನ್ಯಾಸಗಳ ಅಲಂಕರಣವಿರುವ ಕೆಂಪು ಬಣ್ನದ ಮೃತ್ಪಾತ್ರೆಗಳು ದೊರೆತಿವೆ. ಈ ವೈವಿಧ್ಯಮಯ ಮೃತ್ಪಾತ್ರೆಗಳಲಲಿ ಗಮನಾರ್ಹವೆನಿಸುವ ತ್ರಿಪಾದಿಪಾತ್ರೆಗಳು ಕಲಾತ್ಮಕವಾಗಿದ್ದು ಇತಿಹಾಸಕಾಲೀನ ಚೀನೀ ಕಲಾವರ್ಗಕ್ಕೆ ಸಂಬಂಧಿಸುತ್ತವೆಂದು ತಿಳಿಯಲಾಗಿದೆ. ಯಂಗ್ ಶಾವೋ ಸಂಸ್ಕøತಿ ಕ್ರಿ ಪೂ. 700ರವರೆಗೂ ಜೀವಂತವಾಗಿದ್ದು, ಅಲ್ಲಿಯ ಕುಂಬಾರರು ಚೀನೀ ಇತಿಹಾಸ ಕಾಲದ ಕಂಚಿನ ಲೋಹ ಪಾತ್ರೆಗಳನ್ನು ಅನುಕರಿಸಿ ಮೃತ್ಪಾತ್ರೆಗಳನ್ನು ತಯಾರಿಸಿರಬಹುದೆಂದು ಊಹಿಸಲಾಗಿದೆ. ಈ ಸಂಸ್ಕøತಿಯ ಜನರು ತಮ್ಮ ಆಯುಧಗಳಿಗೆ ಬಳಸುತ್ತಿದ್ದ ಕಲ್ಲಿನ ಜೊತೆಗೆ ಜೇಡ್ ಶಿಲೆಯನ್ನೂ ಹೆಚ್ಚಾಗಿ ಬಳಸಿದ್ದಾರೆ. ಇಲ್ಲಿ ಆಯತಾಕಾರದ ಕೊಡಲಿಗಳು ಸಿಕ್ಕಿವೆ. ಜೊತೆಗೆ ಮೂಳೆಯ ಆಯುಧಗಳೂ ದೊರೆತಿವೆ. ಈ ಸಂಸ್ಕøತಿಯ ಜನರಿಗೆ ವ್ಯವಸಾಯ ಹಾಗೂ ಪಶುಪಾಲನೆ ಪ್ರಧಾನ ಕಸುಬುಗಳಾಗಿದ್ದವು.

	ಯಂಗ್ ಶಾವೋ ಸಂಸ್ಕøತಿಯ ಮೃತ್ಪಾತ್ರೆಗಳಿಗೂ ಕುಕುಟೇನಿ ಮತ್ತು ಅನೌ ಮೃತ್ಪಾತ್ರೆಗಳಿಗೂ ಇರುವ ಕೆಲವು ಸಾದೃಶ್ಯಗಳನ್ನು ವಿದ್ವಾಂಸರು ಗುರುತಿಸಿದ್ದಾರೆ.
									(ಎಚ್. ಎಂ. ಎನ್. ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ